ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ. 2 ರಂದು ಉ.ಕ. ಬಂದ್ - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ. 2 ರಂದು ಉ.ಕ. ಬಂದ್

ಬೀದರ್:'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್ ಆಚರಿಸಲಾಗುವುದು' ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಹಾಗೂ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ವಿ. ಕರಿಗಾರ ತಿಳಿಸಿದರು.
'ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳು ಸಂಪೂರ್ಣ ಬಂದ್ ಇರಲಿವೆ' ಎಂದು ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ನೂರಾರು ಮಠಾಧೀಶರ ಮುಂದಾಳತ್ವದಲ್ಲಿ ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ಪ್ರತ್ಯೇಕ ರಾಜ್ಯ ರಚನೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಉತ್ತರ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯಲಿರುವ ಬಂದ್‌ಗೆ 24 ಪ್ರಮುಖ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ' ಎಂದರು.
'ಕರ್ನಾಟಕ ಏಕೀಕರಣಗೊಂಡು 62 ವರ್ಷಗಳು ಕಳೆದರೂ ಉತ್ತರ ಕನಾಟಕ ಅಭಿವೃದ್ಧಿ ಕಂಡಿಲ್ಲ. ಕೃಷಿ, ನೀರಾವರಿ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ರಸ್ತೆ, ರೈಲು, ಸಾರಿಗೆ, ಆರೋಗ್ಯ, ಆಡಳಿತ, ಉದ್ಯಮ, ಮಾಧ್ಯಮ, ಚಲನಚಿತ್ರೋದ್ಯಮ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ದಕ್ಷಿಣ ಕರ್ನಾಟಕ ಭಾಗದ ನಾಯಕರ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ಮುಂದುವರಿದಿದೆ' ಎಂದು ಆರೋಪಿಸಿದರು.
'ಪ್ರತ್ಯೇಕ ರಾಜ್ಯ ರಚನೆಗೆ ಅಗತ್ಯ ಸಂಪನ್ಮೂಲಗಳು ಉತ್ತರ ಕರ್ನಾಟಕ ಭಾಗದಲ್ಲಿ ಇವೆ. ಹೀಗಾಗಿ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವುದು ಈ ಭಾಗದ ಕೋಟ್ಯಂತರ ಜನರ ಬಯಕೆಯಾಗಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಸಂಗ್ರಹಿಸಿದ ಜನಾಭಿಪ್ರಾಯದಲ್ಲಿ 65 ಲಕ್ಷ ಜನರ ಪೈಕಿ ಶೇ 91 ರಷ್ಟು ಜನ ಪ್ರತ್ಯೇಕ ರಾಜ್ಯ ಅವಶ್ಯ ಹಾಗೂ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಜನ ಮನವನ್ನು ಅರಿತು ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು' ಎಂದು ಆಗ್ರಹಿಸಿದರು.
"ಮಹದಾಯಿ, ಕಳಸಾಬಂಡೂರಿ, ರೈತರ ಸಾಲ ಮನ್ನಾ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯದಿಂದ ರೋಸಿಹೋಗಿರುವ ಈ ಭಾಗದ ಜನ ಪ್ರತ್ಯೇಕ ಉತ್ತರ ಕರ್ನಾಟಕವನ್ನು ಮಾನಸಿಕವಾಗಿ ರಚನೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ 96 ಶಾಸಕರು, 22 ವಿಧಾನ ಪರಿಷತ್ ಸದಸ್ಯರು, 12 ಸಂಸದರು ಹಾಗೂ ಇಬ್ಬರು ರಾಜ್ಯಸಭಾ ಸದಸ್ಯರು ಪಕ್ಷಾತೀತವಾಗಿ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡಬೇಕು. ಅಗತ್ಯವಾದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತೆಲಂಗಾಣ ಮಾದರಿಯ ಹೋರಾಟಕ್ಕೆ ಅಣಿಯಾಗಬೇಕು' ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಸೋಮಶೇಖರ ಬರಿಗುಂಡಿ, ಖಜಾಂಚಿ ನಿಲೇಶ ಬನ್ನೂರ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಂದ್‌ಗೆ ಬೆಂಬಲಿಸದಿರಿ
ಬೀದರ್: ಈ ಭಾಗದ ಧಾರ್ಮಿಕ ಮುಖಂಡರು, ಪ್ರಗತಿಪರರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉತ್ತರ ಕರ್ನಾಟಕ ಬಂದ್‌ಗೆ ಬೆಂಬಲಿಸಬಾರದು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮನವಿ ಮಾಡಿದೆ.
ರಾಜ್ಯದ ಮುಖ್ಯಮಂತ್ರಿಯವರೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಸಮಿತಿಯ ಹಿರಿಯ ಉಪಾಧ್ಯಕ್ಷರಾದ ಪ್ರೊ. ದೇವೇಂದ್ರ ಕಮಲ್, ಗುಣಮಂತರಾವ್ ಹಕ್ಯಾಳ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್‌, ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಶಂಕರರಾವ್ ಹೊನ್ನಾ, ಮುಖಂಡರಾದ ಶಿವರಾಜ ಪಾಟೀಲ, ಸುಭಾಷ ಗಾದಗೆ, ಬಸವರಾಜ ಪಾಟೀಲ ಹಾಗೂ ಸುಧಾಕರ ಗಾದಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಏಕೀಕರಣಗೊಂಡು 62 ವರ್ಷಗಳು ಕಳೆದರೂ ಅದರ ಉದ್ದೇಶ ಈಡೇರಿಲ್ಲ. ರಾಜ್ಯದಲ್ಲಿ ಕೇವಲ ಹೈದರಾಬಾದ್ ಕರ್ನಾಟಕ ಭಾಗದವರು ಎಲ್ಲ ರೀತಿಯಿಂದಲೂ ಅನ್ಯಾಯಕ್ಕೆ ಒಳಗಾಗಿದ್ದಾರೆ. ದಕ್ಷಿಣ ಕರ್ನಾಟಕದವರಿಗಿಂತ ಮುಂಬೈ ಕರ್ನಾಟಕದವರೇ ಹೆಚ್ಚಾಗಿ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಹೋರಾಟ 371(ಜೆ) ಸಂಪೂರ್ಣ ಅನುಷ್ಠಾನಗೊಳಿಸುವುದಾಗಿದೆ. ಅದು ಆಗದಿದ್ದರೆ ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಪ್ರಗತಿಪರರು, ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Post Top Ad

Responsive Ads Here